ಕಣ್ಣಾಯಾಸ : ಕಣ್ಣಿನ ಓಸರಿಕೆಯ (ರಿಫ್ರಾಕ್ಷನ್) ತೊಡಕುಗಳು. ಕಣ್ಣಿನ ಹೊಂದುವಳಿ (ಅಕಾಮಡೇಷನ್) ಇಲ್ಲವೇ ಕಣ್ಣುಗುಡ್ಡೆಯ ಸ್ನಾಯುಗಳು ಇರ್ನೋಟ ಆಗದಂತೆ ತಡೆವಾಗಿನ ಸಮತೋಲಗೆಡಿಕೆಗಳಿಂದ ಕಣ್ಣುಗುಡ್ಡೆ ಸ್ನಾಯುಗಳಲ್ಲಿ ತೋರುವ ದಣಿವಿನ ಲಕ್ಷಣ (ಆಸ್ತೆನೋಪಿಯ). ಇದರಿಂದ ಕಣ್ಣುಗಳು ಬಲಗುಂದಿ ಸುಲಭವಾಗಿ ದಣಿಯುತ್ತವೆ. ಕಣ್ಣುನೋಟದ ಕಷ್ಟದ ಕೆಲಸದಲ್ಲಿ ಸೇರುವ ಯಾವ ಅಂಗದಲ್ಲಿ ತೊಡಕಾದರೂ ಹೀಗಾಗಬಹುದು. ಸಂಜೆ ಹೊತ್ತಿಗೆ ಕಣ್ಣಾಯಾಸ ಹೆಚ್ಚುವುದು ಸಾಮಾನ್ಯ. ತಲೆನೋವು, ಕಣ್ಣುರಿ, ನೋವು, ಸುಸ್ತು, ರೆಪ್ಪೆ ತುಯಿತ, ಕಣ್ಣೀರು ಸುರಿತ, ಕಣ್ಣುಕೆಂಪೇರಿಕೆ, ಕಣ್ಣು ಮಂಜೂ ಆಗುತ್ತವೆ. ಕೋರೈಸುವ ಬೆಳಕು, ಸಾಕಷ್ಟು ಬೆಳಕಿಲ್ಲದೆಡೆ ಓದು, ಬಲುಸಣ್ಣ ಲಿಪಿಯನ್ನು ಒಂದೇ ಸಮನಾಗಿ ಓದುತ್ತಲೇ ಇರುವುದು. ಕಣ್ಣಿನ ನೋಟ ಕೆಟ್ಟಿರುವುದು ಮುಖ್ಯ ಕಾರಣಗಳು. ಬೆಳಕು ಹಾಯುವ ಕಣ್ಣಿನ ಮಸೂರ ಇಲ್ಲವೇ ನಡುವರ್ತಿಗಳ (ಮೀಡಿಯ) ಮಸಕಿಂದಲೂ ಕಣ್ಣಿನ ನೋಟದ ಅಚ್ಚೊತ್ತುಗಳನ್ನು ಪಡೆವ ಕಣ್ಜಾಲದ (ರೆಟೀನ) ರೋಗಗಳಿಂದಲೂ ಕಣ್ಣಾಯಾಸ ಆಗಬಹುದು. (ನೋಡಿ- ಕಣ್ಣು,-ಮಾನವನ) (ನೋಡಿ- ಕಣ್ಣು-ಶಾಸ್ತ್ರ) (ನೋಡಿ- ಕನ್ನಡಕಗಳು)                        (ಎಸ್.ಟಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ